ಬೌದ್ಧ ನ್ಯಾಯ

ಬೌದ್ದ ಮತೀಯ ಆಧಾರದ ಮೇಲೆ ಅನ್ವಯವಾಗುವ ವ್ಯಕ್ತಿಗತ ನ್ಯಾಯ. ಇದಾಗಲಿ ಇದರ ಯಾವುದೇ ಭಾಗವಾಗಲಿ ಇಂದು ಭಾರತದಲ್ಲಿ ಆಚರಣೆಯಲ್ಲಿ ಇಲ್ಲ. ಬೌದ್ದ ಮತ ಭಾರತದಲ್ಲಿ ಕೆಲವು ಶತಮಾನ ಪರ್ಯಂತ ಸಾಮಾಜಿಕ ಹಾಗೂ ರಾಜಕೀಯ ಪ್ರಾಮುಖ್ಯ ಪಡೆದಿದ್ದರೂ ಅದರದೇ ಆದ ನ್ಯಾಯ ಹಿಂದೆ ಆಚರಣೆಯಲ್ಲಿತ್ತು ಎಂಬ ಬಗ್ಗೆ ಭಿನ್ನಾಭಿಪ್ರಾಯಗಳು ಇವೆ. ಹೇಗೂ ಇರಲಿ. ಇಸ್ಲಾಮೀ ನ್ಯಾಯ ಭಾರತದಲ್ಲಿ ಉಳಿದುಕೊಂಡು ಬಂದಿದೆ, ಬೌದ್ದ ನ್ಯಾಯ ಉಳಿದುಕೊಂಡು ಬಂದಿಲ್ಲ. ಈಗ ಹಿಂದೂ ವ್ಯಕ್ತಿಗತ ಕಾನೂನುಗಳು ಬೌದ್ಧರಿಗೂ ಅನ್ವಯಿಸುತ್ತವೆ.

ಬೌದ್ಧ ಮತ ಅಸ್ತಿತ್ವಕ್ಕೆ ಬರುವ ಮುನ್ನವೇ ಅಂದಿನ ಸಾಮಾಜಿಕ ಪ್ರಜ್ಞೆಯ ಪ್ರತಿರೂಪವಾಗಿ ಹಿಂದೂ ಧರ್ಮಶಾಸ್ತ್ರ (ಹಿಂದೂ ನ್ಯಾಯ) ಬೆಳೆದುಕೊಂಡು ಬಂದಿತ್ತು. ಅನೇಕ ಸ್ಮøತಿಕಾರರು ವ್ಯಕ್ತಿ, ಸಮಾಜ, ಧರ್ಮ, ನೀತಿ, ಹಿಂದಿನ ಘಟನೆಗಳನ್ನು ಮತ್ತು ಅವರ ಅನುಭವದ ಆಸರೆಯಲ್ಲಿ ಪ್ರಚಲಿತವಿದ್ದ ರೂಢಿಗಳನ್ನು ವಿಚಾರಮಾಡಿ ನ್ಯಾಯಿಕ ಕಲ್ಪನೆಗಳ ಅರ್ಥ, ವ್ಯಾಪ್ತಿ, ಅವು ಸಂದರ್ಭಾನುಸಾರ ಅನ್ವಯಿಸುವ ಬಗೆ ಮತ್ತು ಅವುಗಳ ನಿಯಂತ್ರಣ ಸೂತ್ರಗಳನ್ನು ರಚಿಸಿದ್ದರು. ಆ ಸೂತ್ರಗಳು ಸಾಮಾಜಿಕ ವ್ಯವಸ್ಥೆಯನ್ನು ಸುಗಮ ಗೊಳಿಸುವಲ್ಲಿ ಸಹಾಯಕವಾಗಿದ್ದವೆಂಬುದು ತಿಳಿದುಬರುವ ಅಂಶ. ಬುದ್ಧನನ್ನು ಮೊದಲು ಸೆಳೆದದ್ದು ದಿನನಿತ್ಯದ ತಾಪತ್ರಯಗಳು, ಮಾನಸಿಕ ನೋವುಗಳು. ದುಃಖ ದಾರಿದ್ರ್ಯ, ಆಶೆ ಆಕಾಂಕ್ಷೆಗಳ ಮತ್ತು ಮಾನಸಿಕ ನೋವುಗಳ ನಡುವಿನಲ್ಲಿಯೂ ತೃಪ್ತಿಯ ನೆಲೆಯನ್ನು ಸ್ಥಿರಗೊಳಿಸುವುದರ ಕಡೆಗೆ ಮತ್ತು ಸಹಜ ಶಾಂತತೆಯ ಆತ್ಮೋನ್ನತಿಯ ಕಡೆಗೆ ಅವನ ದೃಷ್ಟಿ ಮತ್ತು ಬೋಧನೆಯ ಗುರಿಯಾಯಿತೇ ವಿನಾ ಆಗ ಅಸ್ತಿತ್ವದಲ್ಲಿದ್ದ ಹಿಂದೂ ನ್ಯಾಯಿಕ ವ್ಯವಸ್ಥೆಯ ಬಗ್ಗೆ ಇದ್ದ ಅತೃಪ್ತಿಯ ಕಾರಣದಿಂದಾಗಿ ಎಂದು ಹೇಳುವಂತಿಲ್ಲ. ಧಾರ್ಮಿಕ ಬದಲಾವಣೆಯ ಜೊತೆಗೆ ನ್ಯಾಯಿಕ ಬದಲಾವಣೆ ಕೂಡಲೇ ಆಗುವಂಥದ್ದಲ್ಲ. ಆದರೂ ಸವಕಲು ನಾಣ್ಯ ತನ್ನ ವಿಶಿಷ್ಟ ರೂಪವನ್ನು ವ್ಯಕ್ತಗೊಳಿಸಲು ಸಾಧ್ಯವಾಗದ ಪ್ರಯುಕ್ತ ಬದಲಾವಣೆಯಲ್ಲಿ ಉಳಿಯದೆ ಅದರ ಬಲಾವಣೆ ಹೊಂದುವುದು ಎಂಬುದನ್ನು ಸ್ಮøತಿಕಾರರು ಒಪ್ಪಿದ್ದರು. ಹೊಸ ಪರಿಸರಗಳು, ಘಟನೆಗಳು, ಹೊಸ ರಾಜಕೀಯ ಮತ್ತು ಸಾಮಾಜಿಕ ಪರಿವರ್ತನೆಗಳು ಹೊಸ ರೂಢಿ ಮತ್ತು ಸಂಪ್ರದಾಯಗಳಿಗೆ ಎಡೆಮಾಡಿಕೊಡುತ್ತವೆ. ಕಾಲಕ್ರಮದಲ್ಲಿ ಆಚರಣೆಯಲ್ಲಿ ಉಳಿಯುವ ರೂಢಿ ಮತ್ತು ಸಂಪ್ರದಾಯಗಳು ನ್ಯಾಯಿಕ ಸ್ವರೂಪ ತಳೆಯುತ್ತವೆ ಎಂದ ಮನುವಿನ ಉಕ್ತಿ ಬುದ್ಧನ ಅನುಯಾಯಿಗಳ ವಿಚಾರಗಳು ಮತ್ತು ಸಾಮಾಜಿಕ ಕಟ್ಟಳೆಗಳು ಸನಾತನ ಹಿಂದೂ ನ್ಯಾಯಶಾಸ್ತ್ರದಲ್ಲಿ ಎಷ್ಟರಮಟ್ಟಿಗೆ ನುಸುಳಿವೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಕಾಲಕ್ರಮದಲ್ಲಿ ಹಿಂದೂ ಧರ್ಮ ಬುದ್ಧನ ಆನೇಕ ವಿಚಾರಗಳನ್ನು ಅಂಗೀಕರಿಸಿ ಕೊಂಡು ಬೆಳೆದಂತೆ, ಅದರ ನ್ಯಾಯಶಾಸ್ತ್ರವೂ ಬೆಳೆದಿರಬಹುದು.

ಈತನಕ ದೊರೆತಿರುವ ಬೌದ್ಧ ಸಾಹಿತ್ಯ ಬೌದ್ಧನ್ಯಾಯ, ಅದರ ವಿಶಿಷ್ಟತೆ ಮತ್ತು ಪರಿಪೂರ್ಣತೆ ಬಗ್ಗೆ ಸ್ಪಷ್ಟ ಚಿತ್ರಕೊಟ್ಟಿಲ್ಲ. ಮನುಸ್ಮøತಿ ಮತ್ತು ಇತರ ಸ್ಮøತಿಗಳ ಪ್ರಭಾವವನ್ನು ಧಮ್ಮಸತ್ತ ಮತ್ತು ಜಾತಕಗಳಲ್ಲಿ ಕಾಣಬಹುದಾಗಿದೆ. ಹಿಂದೂನ್ಯಾಯಶಾಸ್ತ್ರವನ್ನೇ ಮಾರ್ಪಾಡಿನೊಂದಿಗೆ ಬೌದ್ಧರು ಅನ್ವಯಿಸಿಕೊಂಡಿದ್ದಾರೆ ಎಂಬುದು ಒಂದು ಅಭಿಪ್ರಾಯವಾದರೆ, ಯಾಙ್ಯವಲ್ಕ್ಯ ಸ್ಮøತಿಯನ್ನು ಕುರಿತು ಬರೆಯಲಾದ ವಿಶ್ವರೂಪನ ಟೀಕೆಗಳನ್ನು ಆಧರಿಸಿ ಬರೆದಿರುವ ವಿಜ್ಞಾನೇಶ್ವರನ ಮಿತಾಕ್ಷರದಲ್ಲಿ ಬೌದ್ಧನ್ಯಾಯ ಸೂತ್ರಗಳು ಇವೆ ಎಂಬುದು ಕೆಲವರ ಮತ. ಜನನ ನಿಮಿತ್ತ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಬಾದ್ಯತೆಯ ಆಧಿಕಾರ ಪಡೆಯುವ ನ್ಯಾಯಿಕ ಕಲ್ಪನೆ ಬೌದ್ಧನ್ಯಾಯದಿಂದ ಹಿಂದೂ ನ್ಯಾಯಕ್ಕೆ ದೊರೆತ ಕೊಡುಗೆ ಎಂಬುದು ಕೆಲವರ ಅಭಿಪ್ರಾಯ. ಶ್ರಾದ್ಧ ಮುಂತಾದ ಧಾರ್ಮಿಕ ಆಚರಣೆಯ ಅರ್ಹತೆಗೂ ಆಸ್ತಿಗೂ ಇದ್ದ ಸಂಬಂಧ ಈ ಅಭಿಪ್ರಾಯಕ್ಕೆ ಪುಷ್ಟಿ ಕೊಟ್ಟಿದೆ. ಬೌದ್ಧ ನ್ಯಾಯ ಸೂತ್ರಗಳನ್ನು ಅಳವಡಿಸಿಕೊಂಡ ಪ್ರಯುಕ್ತ ಮಿತಾಕ್ಷರ ಭಾರತದ ಬಹುಭಾಗದಲ್ಲಿ ಪ್ರಚಲಿತವಾಗಿರಬಹುದು. ಆದರೆ ಆಸ್ತಿಯ ಕುರಿತಾದ ಸಂಬಂಧದ ಬಗ್ಗೆ ಪುರಾತನ ಮತ್ತು ಮಧ್ಯಯುಗದ ಕಾಲದ ಬೌದ್ಧ ಗ್ರಂಥದಲ್ಲಿ ವಿಶೇಷ ಉಲ್ಲೇಖವಿಲ್ಲ. ಬಂಗಾಲ ಮತ್ತು ಬರ್ಮಾದೇಶಗಳ ನ್ಯಾಯ ಸೂತ್ರಗಳ ಮೇಲೆ ಬೌದ್ಧ ಧರ್ಮದ ಛಾಯೆ ಇದೆ ಎಂಬುದು ಕೆಲವರ ವಾದ.

ಬುದ್ಧನ ಅನಂತರದ ಕಾಲದ್ದೆಂದು ಪರಿಗಣಿತವಾದ 'ಅಗ್ನಿಪುರಾಣ' ದಲ್ಲಿ ಬೌದ್ದರಿಗೆ ಸಂಬಂಧಿಸಿದ ವಿಷಯಗಳನ್ನು ಹೇಳಲಾಗಿದೆ. ಅದರಲ್ಲಿಯ 253ರಿಂದ 258ರ ವರೆಗಿನ ಪ್ರಕರಣಗಳಲ್ಲಿ ನ್ಯಾಯಶಾಸ್ತ್ರ, ನ್ಯಾಯಾಲಯ ಮತ್ತು ಸಂಬಂಧಿತ ಇತರ ವಿಷಯಗಳನ್ನು ಹೇಳಿದ್ದರೂ ಬೌದ್ಧನ್ಯಾಯದ ಸ್ಪಷ್ಟಚಿತ್ರವಿಲ್ಲ. ಈ ಪುರಾಣದಿಂದ ಬುದ್ಧನ ಪೂರ್ವ ಮತ್ತು ಅನಂತರ ಕಾಲಗಳಲ್ಲಿ ನ್ಯಾಯಿಕ ವ್ಯವಸ್ಥೆಯಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬರುವುದಿಲ್ಲವಾದರೂ ಬೌದ್ಧ ನ್ಯಾಯವೇ ಇರಲಿಲ್ಲವೆಂದು ಹೇಳುವುದೂ ತಪ್ಪಾದೀತು. ಏಕೆಂದರೆ ಧಾರ್ಮಿಕ ಕಟ್ಟಳೆಗಳ ಜೊತೆಗೆ ವ್ಯಕ್ತಿಗತ ವಿವಾದಗಳಲ್ಲಿ ಬೌದ್ಧರಾಜರುಗಳು ಮಾಡಿರುವ ನಿರ್ಣಯಗಳು ಬೌದ್ಧ ಗ್ರಂಥಗಳಲ್ಲಿ ದೊರೆಯುತ್ತವೆ. ಧಮ್ಮಸತ್ರ ಹಾಗೂ ಅನೇಕ ಜಾತಕಗಳು ಕೇವಲ ಹಿಂದೂ ನ್ಯಾಯದ ಪಡಿನೆಳಲು ಎಂದು ಹೇಳುವ ಹಾಗೆಯೂ ಇಲ್ಲ. ಒಟ್ಟಾರೆ ಈ ಬಗ್ಗೆ ಹೆಚ್ಚಿನ ಸಂಶೋಧನೆ ಆಗಿಲ್ಲವೆಂದು ಹೇಳಬಹುದು.

ಹಿಂದೂ ನ್ಯಾಯಶಾಸ್ತ್ರದಲ್ಲಿ ಮನು ಮುಖ್ಯವ್ಯಕ್ತಿ. ಬೌದ್ಧ ನ್ಯಾಯದಲ್ಲಿ ಮನು ಮತ್ತು ಮನೋಸಾರ ಎಂಬ ಹೆಸರುಗಳು ಮುಖ್ಯವಾಗಿವೆ. ಈ ನ್ಯಾಯದ ಪರಂಪರೆಯಲ್ಲಿ ಸುಮಾರು 35 ಮಹಾಜನರ ಸಂಗ್ರಹಗಳು ಇವೆ. ಜಾತಕ ಸಾಹಿತ್ಯದಲ್ಲಿ ಮಹೋಸತ್ತ ಪ್ರಮುಖ, ಈತ ವಿಚಕ್ಷಣ ವ್ಯಕ್ತಿ. ಮಿಥಿಲೆಯ ರಾಜ ಈತನನ್ನು ಬರಮಾಡಿಕೊಳ್ಳುವುದಕ್ಕಿಂತ ಮುಂಚೆಯೇ ಪ್ರಸಿದ್ಧಿ ಪಡೆದಿದ್ದ ಮಹೋಸತ್ತ, ಮಹಾತುಂಡಿಲ, ವಿಧುರ, ತೇಸುಕ ಇವರುಗಳ ಜಾತಕಗಳು ಕೆಲವು ನಿರ್ಣಯಗಳು ರಾಜರ ನಿರ್ಣಯಗಳಾಗಿರದೆ ಬೋಧಿಸ್ತವನ ನಿರ್ಣಯಗಳಾಗಿವೆ. ಹಾಗೆಯೇ ಮಹಾಉಮ್ಮಗನ ಜಾತಕಗಳಲ್ಲಿ ಕಾಣಬರುವ ಸಾಮಾಜಿಕ ಚಿತ್ರಣ ಐತಿಹಾಸಿಕವಾಗಿ ಸಮಕಾಲೀನ ಚರಿತ್ರೆಗೆ ಹೊಂದುವುದಿಲ್ಲ. ಕಾರಣ ಆ ಸುಮಾರಿಗೆ ಭಾರತದಲ್ಲಿ ನ್ಯಾಯಿಕ ವ್ಯವಸ್ಥೆ ಲಿಖಿತ ರೂಪದ ನ್ಯಾಯ ಸೂತ್ರಗಳ ನಿಯಂತ್ರಣಕ್ಕೆ ಒಳಪಟ್ಟಿತ್ತು. ಜಾತಕಗಳಲ್ಲಿ ಬರುವುದು ರಾಜಸತ್ತ, ಹೀಗೆ ಧಮ್ಮಸತ್ತ ಮತ್ತು ರಾಜಸತ್ತಗಳ ಮೇರೆಗೆ ವ್ಯಕ್ತಿಗತ ವಿವಾದಗಳನ್ನು ಬಗೆಹರಿಸಲಾಗುತಿತ್ತು. ಈ ರಾಜಸತ್ತದಲ್ಲಿ ಪ್ರಶಾಸನದ ಮೂಲವನ್ನು ಕಾಣಬಹುದು.

ಬೌದ್ಧನ್ಯಾಯದಲ್ಲಿಯ ಮನು, ಮಹಾಸಮ್ಮತರು ಧಮ್ಮಸತ್ತ ಹಾಗೂ ಜಾತಕಗಳು ಇತರ ದೇಶದ ನ್ಯಾಯಗಳ ಮೇಲೆ ಪ್ರಭಾವ ಬೀರಿವೆ. ಬೌದ್ಧಧರ್ಮ ಶ್ರಿಲಂಕಾ, ಜಪಾನ್, ಚೀನ, ಇಂಡೋಚೀನ, ಇಂಡೋನೇಷ್ಯ, ಬರ್ಮಾ, ಸಿರಿಯಾ ಮುಂತಾದ ಅನೇಕ ದೇಶಗಳಲ್ಲಿ ಪ್ರಧಾನ ಪಾತ್ರ ವಹಿಸಿದರೂ ಚೀನ ಜಪಾನ್ ದೇಶಗಳ ನ್ಯಾಯಶಾಸ್ತ್ರಗಳ ಮೇಲೆ ಹೆಚ್ಚಿನ ಪ್ರಭಾವ ಬೇರಿಲ್ಲ. ಇಂಡೋಚೀನ ಮತ್ತು ಇಂಡೊನೇಷ್ಯಾಗಳ ಪ್ರಾಚೀನ ನ್ಯಾಯದ ಮೇಲೆ ಹಿಂದೂ ನ್ಯಾಯದ ಪ್ರಭಾವ ಇದ್ಟಷ್ಟು ಬೌದ್ಧನ್ಯಾಯದ ಪ್ರಭಾವ ಇಲ್ಲ. ಆದರೆ ಧಮ್ಮಸತ್ತ ಮತ್ತು ಜಾತಕಗಳ ಪ್ರಭಾವ ಬರ್ಮಾ ಮತ್ತು ಥೈಲ್ಯಾಂಡ್(ಸಯ್ಯಾಮ್) ದೇಶಗಳ ನ್ಯಾಯ ಶಾಸ್ತ್ರಗಳ ಮೇಲೆ ಆಗಿದೆ. ಧಮ್ಮಸತ್ತದಲ್ಲಿ 18 ಪ್ರಕರಣಗಳು ಹಾಗೂ ಬರ್ಮಾದ ವಾಘರೂ ಸಂಹಿತೆಯಲ್ಲೂ 18 ಪ್ರಕರಣಗಳು ಇವೆ. ಆದರೆ ಸಯಾಮೀ ಧಮ್ಮಸತ್ತದಲ್ಲಿ 39 ಪ್ರಕರಣಗಳು ಇವೆ. 1350ರ ಸುಮಾರಿನ ಆಯುತಿಯಾ ರಾಜಮನೆತನದ ಕಾಲದ್ದಾಗಿರಬಹುದಾದ ಸಯಾಮೀಧಮ್ಮಸತ್ತ ವಾಘರೂ ಸಂಹಿತೆಯ ಪಡಿನೆರಳಿನಂತಿದ್ದರೂ ಅನೇಕ ಹೆಚ್ಚಿನ ವಿಷಯಗಳನ್ನು ಅಳವಡಿಸಿಕೊಂಡಿದೆ.
(ಎಲ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ